ಭಾಸ್ಕರ ಕವಿ :-
ಸುಮಾರು 1424. ಜೈನಕವಿ. ಜೀವಂಧರ ಚರಿತೆ ಕಾವ್ಯದ ಕರ್ತೃ. ತಂದೆ ಬಸವಾಂಕ. ಪೆನುಗೊಂಡೆ ಈತನ ಸ್ಥಳವೆಂದೂ ಅಲ್ಲಿಯ ಶಾಂತಿನಾಥ ಬಸದಿಯಲ್ಲಿ ಈ ಕಾವ್ಯವನ್ನು ಬರೆದನೆಂದೂ ಆತನ ಕಾವ್ಯದಿಂದ ತಿಳಿದು ಬರುತ್ತದೆ. ಪೂರ್ವಕವಿಗಳಲ್ಲಿ ಪೊನ್ನ, ವಿಜಯ, ಗಜಾಂಕುಶ, ಅಗ್ಗಳ, ನೇಮಿಚಂದ್ರ, ಗುಣವರ್ಮ, ನಾಗವರ್ಮ ಮೊದಲಾದವರನ್ನು ಸ್ತುತಿಸಿದ್ದಾನೆ.

	ಜೀವಂಧರ ಚರಿತೆ ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿದ್ದು 18 ಸಂಧಿ 957 ಪದ್ಯಗಳಿಂದ ಕೂಡಿದೆ. ಕೃತಿರಚನೆಯ ಕಾಲ 1424. ಸಂಸ್ಕøತದಲ್ಲಿ ವಾದೀಭ ಸಿಂಹಸೂರಿ ಬರೆದಿರುವ ಜೀವಂಧರ ಚರಿತೆಯನ್ನು ತಾನು ಕನ್ನಡದಲ್ಲಿ ಬರೆದಿರುವುದಾಗಿ ಹೇಳಿಕೊಂಡಿದ್ದಾನೆ. ರಾಜಪುರಿಯ ಸತ್ಯಂಧರ ರಾಜನ ಕುಮಾರ ಜೀವಂಧರನ ಚರಿತೆ ಕಾವ್ಯದ ವಸ್ತು. ಈ ಕಥೆ ಭಾರತದ ಹಲವಾರು ಭಾಷೆಗಳಲ್ಲಿ ಪ್ರಚಲಿತವಿದ್ದು ಇದನ್ನು ಕನ್ನಡದಲ್ಲಿ ಮೊದಲು ಬಾರಿಗೆ ರಚಿಸಿದ ಕೀರ್ತಿ ಈತನದು. ಕವಿ ತನಗಿಂತ ಹಿಂದಿನ ಕವಿಗಳ ಪ್ರಭಾವಕ್ಕೆ ಒಳಗಾಗಿದ್ದನೆಂಬುದಕ್ಕೆ ಕೃತಿಯಲ್ಲಿ ಸಾಕಷ್ಟು ನಿದರ್ಶನಗಳು ದೊರೆಯುತ್ತವೆ. ರಾಘವಾಂಕ ಹಾಗೂ ಕುಮಾರವ್ಯಾಸರ ಪ್ರಭಾವ ಈತನಮೇಲೆ ಆಗಿರುವುದು ಕಾವ್ಯದಲ್ಲಿ ನಿಚ್ಚಳವಾಗಿ ಕಾಣಬರುತ್ತದೆ. ಆದರೂ ಕವಿಯಲ್ಲಿ ಪ್ರತಿಭಾಸ್ವೋಪಜ್ಞತೆ ಇದೆ. ಪ್ರಮುಖವಾಗಿ ಇದು ನೀತಿ ಬೋಧಕ ಜೈನ ಧಾರ್ಮಿಕ ಕಾವ್ಯ. ಪರಮತ ವಿಡಂಬನೆ ಇಲ್ಲ. ಕಾವ್ಯಾಂಶಗಳು ಕಡಿಮೆಯಾದರೂ ವರ್ಣನೆಗಳು ಸೊಗಸಾಗಿವೆ. ಶೈಲಿ ಸರಳ, ಸುಂದರ. ಭಾಷಾ ಪ್ರಭುತ್ವವಿದೆ. ಈತ ಉತ್ತಮ ಕವಿ ಎಂಬುದರಲ್ಲಿ ಸಂದೇಹವಿಲ್ಲ.															

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ